ಬೆಂಗಳೂರು(ಜುಲೈ.16) ಐಎಂಎ ಜ್ಯೂವೆಲರಿ ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವನ್ನು ಎದುರಿಸುತ್ತಿರುವ ಮಾಜಿ ಸಚಿವ, ಶಿವಾಜಿನಗರದ ಶಾಸಕ ರೋಷನ್ ಬೇಗ್ ಅವರಿಗೆ ತಲೆಮರೆಸಿಕೊಳ್ಳಲು ಬಿಜೆಪಿ ನಾಯಕರು ಸಹಾಯ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ತಮ್ಮ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಕುಮಾರಸ್ವಾಮಿಯವರು, ರೋಷನ್ ಬೇಗ್ ಬೆಂಗಳೂರು ಬಿಟ್ಟು ಹೋಗಲು ಪ್ರಯತ್ನಿಸಿದ್ದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಂತೋಷ್ ಹಾಗೂ ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್ ಅವರು ಬೇಗ್ ಜೊತೆಗಿದ್ದರು. ಎಸ್‌ಐಟಿ ಅಧಿಕಾರಿಗಳನ್ನು ನೋಡಿದ ಕೂಡಲೇ ಬಿಎಸ್‌ಯಡಿಯೂರಪ್ಪನವರ ಆಪ್ತ ಸಂತೋಷ್ ಪರಾರಿಯಾಗಿದ್ದಾನೆ ಎಂದು ಹೇಳಿದ್ದಾರೆ.

ಕೋಟ್ಯಂತರ ರೂ. ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ರೋಷನ್ ಬೇಗ್ ತಲೆಮರೆಸಿಕೊಳ್ಳಲು ಸಹಾಯ ಮಾಡುವ ಮೂಲಕ ಬಿಜೆಪಿ ನಾಯಕರ ಬಣ್ಣ ಬಯಲಾಗಿದೆ. ಈ ಮೂಲಕ ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಮುಖಂಡರು ಪ್ರಯತ್ನಿಸಿರುವುದು ಸ್ಪಷ್ಟವಾಗಿದೆ ಎಂದು ಸಿಎಂ ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.