ಮಂಡ್ಯ:(ಫೆ19): ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಗೆ ಮಂಡ್ಯದ ಯೋಧ ಗುರು ಅವರು ಹುತಾತ್ಮರಾಗಿದ್ದು, ಇನ್ನೂ ಅವರ ಕುಟುಂಬದಲ್ಲಿ ದುಃಖ ಮರೆಯಾಗಿಲ್ಲ, ಇದರ ಬೆನ್ನಲಿಯೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ ತಂಡ ಯೋಧ ಗುರು ಅವರ ಕುಟುಂಬದವರನ್ನು ಭೇಟಿ ನೀಡಿ ಸಾಂತ್ವನ ಹೇಳುವುದರ ಜೊತೆಗೆ ಧನ ಸಹಾಯವನ್ನು ಮಾಡಿದ್ದಾರೆ.

ಚಿತ್ರದ ನಿರ್ಮಾಪಕರಾದ ಡಾ.ಡಿ,ಎಸ್, ಮಂಜುನಾಥ್, ನಿರ್ದೇಶಕ ಕುಮಾರ್, ಕಾರ್ಯಕಾರಿ ನಿರ್ಮಾಪಕರಾದ ಶ್ರೀನಿವಾಸ್ ಹಾಗೂ ಚಿತ್ರದ ನಟ, ನಟಿಯರಾದ ತಬಲಾ ನಾಣಿ, ಸಂಜನಾ ಆನಂದ್, ಅಪೂರ್ವಶ್ರೀ, ಯೋಧ ಗುರು ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ.

ಭಾನುವಾರದಂದು ಚಿತ್ರಮಂದಿರದಲ್ಲಿ ಕಲೆಕ್ಷನ್ ಆದ ಹಣವನ್ನು ದೇಶಕ್ಕಾಗಿ ಹುತಾತ್ಮರಾದ ಯೋಧ ಗುರು ಅವರ ಕುಟುಂಬಕ್ಕೆ ಚೆಕ್ ಮೂಲಕ ಧನ ಸಹಾಯವನ್ನು ಮಾಡಿದ್ದಾರೆ. ಈ ವೇಳೆ ಮಾತನಾಡಿದ ಚಿತ್ರದ ನಿರ್ಮಾಪಕರಾದ ಮಂಜುನಾಥ್ ಅವರು ಮಾತನಾಡಿ, ಈ ಘಟನೆ ನಡೆದಿದ್ದು ತುಂಬಾ ನೋವಾಗಿದೆ, ನಾನು ಸೈನ್ಯಕ್ಕೆ ಸೇರಲು ಬಯಸಿ ಫೇಲಾಗಿದ್ದೆ, ಆದರೆ ಸಿನಿಮಾದಲ್ಲಿ ಸೈನಿಕರ ಬಗ್ಗೆ ಹೇಳಲು ಪ್ರಯತ್ನಿಸಿದ್ದೇನೆ, ನಿರಂತರ ಯೋಧರ ಬೆಂಬಲಕ್ಕೆ ನಿಲ್ಲುವ ಕಾರ್ಯ ಮುಂದುವರೆಯುತ್ತದೆ ಎಂದಿದ್ದಾರೆ.

ಹಿರಿಯ ನಟರಾದ ತಬಲ ನಾಣಿ ಮಾತನಾಡಿ, ಯೋಧರು ದೇಶ ಕಾಯುವ ದೇವರು, ಹುತಾತ್ಮರಾದ ಗುರು ಅವರ ಅಂತಿಮ ದರ್ಶನಕ್ಕೂ ಭಾಗವಹಿಸಿದ್ದು, ಅಂದು ಕುಟುಂಬದವರಿಗೆ ಸಾಂತ್ವಾನ ಹೇಳಲು ಸಾಧ್ಯವಾಗದ ಕಾರಣ, ಇಂದು ಚಿತ್ರತಂಡದವರು ಭೇಟಿ ನೀಡಿ ಸಂತ್ವಾನ ಹೇಳಿದ್ದೇವೆ ಎಂದಿದ್ದಾರೆ. ಇನ್ನು ನಟಿ ಅಪೂರ್ವಶ್ರೀ ಮಾತನಾಡಿ ಎಲ್ಲರಿಗೂ ಸಾವು ಖಚಿತ ಆದರೆ ಇಡೀ ದೇಶವೇ ನೆನೆಯುವಂತೆ ಗುರು ಅವರು ದೇಶಕ್ಕಾಗಿ ಮಡಿದಿದ್ದಾರೆ. ನಮ್ಮನೆಲ್ಲ ಕಾಯುವ ಯೋಧರಿಗೆ ಸೌಲಭ್ಯ ನೀಡುವುದರ ಜೊತೆಗೆ ಇಂತಹ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.