ಮಂಡ್ಯ(ಜೂ:29): ನಿಮ್ಮ ವಯಕ್ತಿಕ ಅಸಮಾಧಾನ ಏನೇ ಇರಲಿ, ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಮಗ ನಿಖಿಲ್ ಸೋತ ಕಾರಣ ಮಂಡ್ಯ ಜಿಲ್ಲೆಯನ್ನು ಕಡೆಗಣಿಸಬೇಡಿ ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ಮಾಜಿ ಸಚಿವ ಚೆಲುವರಾಯಸ್ವಾಮಿ ಮನವಿ ಮಾಡಿದ್ದಾರೆ.

ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ ಮಾತನಾಡಿದ ಅವರು ರೈತರಿಗೆ 10-15 ದಿನ ನೀರು ಬಿಡುವ ಅವಕಾಶ ಇತ್ತು. ಆದರೆ ಮುಖ್ಯಮಂತ್ರಿಗಳು ಈ ಸಮಸ್ಯೆಯ ಬಗ್ಗೆ ಹೇಳಲಿಲ್ಲ ಕಾರಣ ಕಳೆದ ಚುನಾವಣೆಯಲ್ಲಿ ವ್ಯತ್ಯಾಸ ಮಾಡಿದ್ದಾರೆಂದೋ ಅಥವಾ ಜನರಿಗೆ ಸಹಾಯ ಮಾಡೋದು ಬೇಡ ಎಂದೋ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.

ಈ ಬಾರಿಯೂ ನೀರು ಬಿಡಲು ಅವಕಾಶ ಇದ್ದರೂ ನೀರು ಬಿಟ್ಟಿಲ್ಲ. ಇರುವ ನೀರನ್ನು ಬಳಸಬೇಡಿ ಎಂದು ಪ್ರಾಧಿಕಾರ ಹೇಳಿಲ್ಲ. ಬೆಳೆಗೂ ನೀರು ಕೊಟ್ಟು ಕುಡಿಯುವುದಕ್ಕೂ ನೀರು ಉಳಿಸಿಕೊಳ್ಳಬಹುದಿತ್ತು. ಆದರೆ ಖಡಾಖಂಡಿತವಾಗಿ ನೀರು ಬಿಡೋದು ಬೇಡ ಎಂದು ತೀರ್ಮಾನಿಸಿದ್ದಾರೆ ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.