ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಬೆಳಿಗ್ಗೆ 11 ಗಂಟೆಗೆ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಈ ಸಭೆ ಜರುಗಲಿದೆ.

ಇನ್ನು ಸಭೆಯಲ್ಲಿ ಉಗ್ರರ ದಾಳಿ ಬಗ್ಗೆ ಪಕ್ಷಗಳಿಗೆ ಮಾಹಿತಿ. ಪ್ರಸ್ತುತ ಕೈಗೊಳ್ಳಲಾಗಿರುವ ಕ್ರಮ ಹಾಗೂ ಉಗ್ರರ ನಾಶಕ್ಕೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ 40 ಮಂದಿ ಸಿಆರ್‍ಫಿಎಫ್ ಯೋಧರ ಪಾರ್ಥಿವ ಶರೀರವಿರುವ ಪೆಟ್ಟಿಗೆಗಳನ್ನು ಪಾಲಮ್ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ತರಲಾಯಿತು. ಮೊದಲು ಸೇನಾಪಡೆಯಿಂದ ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಲಾಯಿತು. ಬಳಿಕ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಗೃಹ ಸಚಿವ ರಾಜನಾಥ್ ಸಿಂಗ್ ಮೊದಲಾದವರು ಅಂತಿಮ ನಮನ ಸಲ್ಲಿಸಿದರು.

ಸೇನಾಪಡೆಯ ಗೌರವದ ಬಳಿಕ ನರೇಂದ್ರ ಮೋದಿ, ಎಲ್ಲ ಯೋಧರ ಶವಪೆಟ್ಟಿಗೆಗಳ ಸುತ್ತ ಪ್ರದಕ್ಷಿಣೆ ಬಂದು, ನಮಸ್ಕರಿಸಿ, ಗೌರವ ಸಲ್ಲಿಸಿದರು.

ಇನ್ನು 40ಕ್ಕೂ ಹೆಚ್ಚು ಯೋಧರ ಸಾವಿಗೆ ಕಾರಣವಾದ ಭೀಕರ ಉಗ್ರ ದಾಳಿ ವಿರುದ್ಧ ಸೇಡಿಗಾಗಿ ದೇಶಾದ್ಯಂತ ಭುಗಿಲೆದ್ದಿರುವ ಜನಾಗ್ರಹದ ನಡುವೆಯೇ ಸಿಆರ್‍ಪಿಎಫ್ ಪ್ರತಿಕಾರದ ಸಂಕಲ್ಪ ತೊಟ್ಟಿದೆ. ಈ ಮಧ್ಯೆ ಪ್ರಧಾನಿ ಮೋದಿ ಅವರೂ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದ್ದು, ಸೇಡು ತೀರಿಸಿಕೊಳ್ಳಲು ಸೇನೆಗೆ ಮುಕ್ತ ಸ್ವಾತಂತ್ರ್ಯ ನೀಡಿರುವುದಾಗಿ ಘೋಷಿಸಿದ್ದಾರೆ.