ಶಿರಸಿ (ಫೆ.18): ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಮನೆಗೆ ನಿನ್ನೆ ತಡರಾತ್ರಿ ಜೀವ ಬೆದರಿಕೆ ಕರೆ ಬಂದಿದ್ದು, ಜೀವ ತೆಗಯುತ್ತೇವೆ ಎಂದು ಬೆದರಿಸಿದ್ದಾರೆ.

ನಿಮ್ಮ ಪಾಡಿಗೆ ನಿಮ್ಮ ಕೆಲಸ ಮಾಡಿಕೊಂಡು ಇರಬೇಕು. ಮುಸ್ಲಿಮರ ಬಗ್ಗೆ ಮಾತನಾಡಿದರೆ ನಿಮ್ಮನ್ನು, ನಿಮ್ಮ ಕುಟುಂಬವನ್ನು ಬಿಡುವದಿಲ್ಲ. ಜೀವ ತೆಗಯುತ್ತೇವೆ ಎಂದು ದೂರವಾಣಿ ಕರೆ ಮಾಡಿದ ಅನಾಮಿಕ ಬೆದರಿಕೆ ವೊಡ್ಡಿದ್ದಾನೆ.

ತಡರಾತ್ರಿ 1.45ರ ಸುಮಾರಿಗೆ ಹೆಗಡೆ ಅವರ ಮನೆಯ ಲ್ಯಾಂಡ್‍ಲೈನ್‍ಗೆ ದೂರವಾಣಿ ಕರೆ ಬಂದಿದೆ. ಆದರೆ, ಅವರು ಮನೆಯಲ್ಲಿರಲಿಲ್ಲ. ಹಾಗಾಗಿ, ಅವರ ಪತ್ನಿ ರೂಪಾ ಹೆಗಡೆ ಕರೆ ಸ್ವೀಕರಿಸಿ ಮಾತನಾಡಿದ್ದಾರೆ. ಈ ವೇಳೆ ಕರೆ ಮಾಡಿದ ಅನಾಮಿಕರು ಅವಾಚ್ಯ ಶಬ್ದಗಳಿಂದ ಅವರಿಗೆ ಬಯ್ಯಲು ಆರಂಭಿಸಿ. ಜೀವ ಬೆದರಿಕೆಯನ್ನು ಒಡ್ಡಿದ್ದಾನೆ.

ಇನ್ನು ಈ ಮೊದಲು ಸಾಕಷ್ಟು ಬಾರಿ ಜೀವ ಬೆದರಿಕೆ ಕರೆಗಳು ಬಂದಿದ್ದವು. ಈಗ ಮತ್ತದೇ ಘಟನೆ ಪುನರಾವರ್ತನೆಗೊಂಡಿದೆ.

ಕರೆ ಮಾಡಿದವರು ಅವಾಚ್ಯ ಶಬ್ದಗಳಿಂದ ಬಯ್ಯಲು ಆರಂಭಿಸಿದಾಗ ರೂಪಾ ಅವರು ಕಾಲ್ ಕಟ್ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರ ಆಪ್ತ ಸಹಾಯಕ ಸುರೇಶ್ ಶೆಟ್ಟಿ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆರ್‍ಎಸ್‍ಎಸ್ ಹಿನ್ನೆಲೆ ಹೊಂದಿರುವ ಅನಂತ್ ಕುಮಾರ್ ಹೆಗಡೆ ಅವರು, ಪಕ್ಕಾ ಹಿಂದು ವಾದಿಯಾಗಿದ್ದಾರೆ.