ನವದೆಹಲಿ(ಫೆ.12): ಕೋರ್ಟ್ ಗಮನಕ್ಕೆ ತರದೆಯೇ ಸಿಬಿಐನ ಹಿರಿಯ ತನಿಖಾಧಿಕಾರಿಯೊಬ್ಬರ ವರ್ಗಾವಣೆ ಮಾಡಿದಕ್ಕೆ ಮಾಜಿ ಸಿಬಿಐ ಮುಖ್ಯಸ್ಥ ಎಂ. ನಾಗೇಶ್ವರ್ ರಾವ್ ಹಾಗೂ ಹೆಚ್ಚುವರಿ ಕಾನೂನು ಸಲಹೆಗಾರ ಎಸ್. ಭಾಸುರನ್ ಅವರಿಬ್ಬರನ್ನೂ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠವು ಈ ಪ್ರಕರಣದಲ್ಲಿ ಅವರಿಬ್ಬರೂ ತಪ್ಪಿತಸ್ಥರೆಂದು ಪರಿಗಣಿಸಿದೆ. ಸುಪ್ರೀಕೋರ್ಟ್ ಪೀಠವು, ಎಂ. ನಾಗೇಶ್ವರ್ ರಾವ್ ಮತ್ತು ಎಸ್. ಭಾಸುರನ್ ಅವರಿಬ್ಬರಿಗೂ ಅನಿರ್ದಿಷ್ಟ ಅವಧಿಯವರೆಗೂ ಕೋರ್ಟ್ ಹಾಲ್‍ನಲ್ಲೇ ವಾಸವಿರಬೇಕು ಮತ್ತು 1 ಲಕ್ಷ ರೂ ದಂಡವನ್ನೂ ವಿಧಿಸಲಾಗಿದೆ. ಹಾಗೂ ಒಂದು ವಾರದೊಳಗೆ ಮಾಜಿ ಸಿಬಿಐ ಮುಖ್ಯಸ್ಥರು ಈ ದಂಡದ ಮೊತ್ತವನ್ನು ಕೋರ್ಟ್‍ಗೆ ನೀಡಬೇಕು ಎಂದು ಸೂಚಿಸಿದೆ.

ಕೇಂದ್ರ ಸರ್ಕಾರವು ಅಲೋಕ್ ವರ್ಮಾ ಮತ್ತು ರಾಕೇಶ್ ಅಸ್ತಾನಾ ಅವರಿಬ್ಬರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ಎಂ. ನಾಗೇಶ್ವರ್ ರಾವ್ ಅವರನ್ನು ಹಂಗಾಮಿ ಸಿಬಿಐ ಮುಖ್ಯಸ್ಥರನ್ನಾಗಿ ನೇಮಿಸಿತ್ತು.

ನಾಗೇಶ್ವರ್ ರಾವ್ ಅವರ ನೇಮಕಾತಿಗೆ ಕೋರ್ಟ್ ಕೆಲ ಷರತ್ತುಗಳನ್ನ ವಿಧಿಸಿತ್ತು. ತಮ್ಮ ಗಮನಕ್ಕೆ ತರದೆ ಯಾವುದೇ ಪ್ರಮುಖ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದು ಎಂದು ಸೂಚಿಸಿತ್ತು. ಆದರೆ ಅಧಿಕಾರಕ್ಕೆ ಏರಿದ ಕೂಡಲೆ ಅಂದರೆ ಜನವರಿ 17ರಂದು ನಾಗೇಶ್ವರ್ ರಾವ್ ಅವರು ಹಲವಾರು ಸಿಬಿಐ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದರು.

ಅದರಲ್ಲಿಯೂ ಜಂಟಿ ನಿರ್ದೇಶಕ ಎ.ಕೆ. ಶರ್ಮಾ ಅವರಂಥ ಉನ್ನತ ಅಧಿಕಾರಿಯನ್ನು ಕೋರ್ಟ್ ಆದೇಶ ದಿಕ್ಕರಿಸಿ ವರ್ಗಾವಣೆ ಮಾಡಿದ್ದು ಅಕ್ಷಮ್ಯ ಅಪರಾಧ ಎಂದು ಸುಪ್ರೀಂ ಕೋರ್ಟ್ ಪರಿಗಣಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ. 7ರಂದೇ ನಾಗೇಶ್ವರ್ ರಾವ್ ಅವರನ್ನ ಕೋರ್ಟ್ ವಿಚಾರಣೆ ನಡೆಸಿತ್ತು. ಆಗ ನಾಗೇಶ್ವರ್ ಅವರು ಕೋರ್ಟ್‍ಗೆ ಕ್ಷಮೆ ಕೇಳಿದ್ದರು.ನಾಗೇಶ್ವರ್ ರಾವ್ ಪರ ಅಟಾರ್ನಿ ಜನರಲ್, ಎ.ಕೆ. ಶರ್ಮಾ ಅವರನ್ನು ವರ್ಗಾವಣೆ ಮಾಡಿದ ವಿಚಾರವನ್ನು ಕೋರ್ಟ್ ಗಮನಕ್ಕೆ ತರದೇ ಇರುವುದು ಕಿರಿಯ ವಕೀಲರ ತಪ್ಪು ಎಂದು ವಾದ ಮಂಡಿಸಿದ್ದರು. ಆದರೆ ಇದಕ್ಕೆ ಮಣಿಯದ ಸುಪ್ರೀಂ ಕೋರ್ಟ್‍ನ ಆದೇಶವನ್ನು ಧಿಕ್ಕರಿಸಿ ನಡೆದುಕೊಂಡ ಕ್ರಮವನ್ನು ಗಂಭೀರವಾಗಿ ಪರಿಗಣಿಸಿದೆ.

ಇನ್ನು ಎ.ಕೆ. ಶರ್ಮಾ ಅವರ ವರ್ಗಾವಣೆಯ ಹಿಂದಿರುವ ಎಲ್ಲಾ ಅಧಿಕಾರಿಗಳ ಪಟ್ಟಿ ನೀಡುವಂತೆ ಸುಪ್ರೀ ಕೋರ್ಟ್ ಪೀಠವು ಈಗಿನ ಸಿಬಿಐ ಮುಖ್ಯಸ್ಥ ರಿಷಿ ಕುಮಾರ್ ಶುಕ್ಲಾ ಅವರಿಗೆ ಸೂಚಿಸಿದೆ.