ಹೊಸದಿಲ್ಲಿ: ಈ ವರ್ಷದ ಸೆಪ್ಟೆಂಬರ್‍ನಲ್ಲಿ ಫ್ರಾನ್ಸ್‍ನಿಂದ ಮೊದಲ ರಫೇಲ್ ಯುದ್ಧ ವಿಮಾನ ಖರೀದಿಸುವುದು ಖಚಿತ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿರುವ ಬೆನ್ನಲ್ಲಿಯೇ ನೆರೆಯ ಪಾಕಿಸ್ತಾನವು ಅತ್ಯಾಧುನಿಕ ಜೆಎಫ್-17 ಜೆಟ್ ಯುದ್ಧ ವಿಮಾನಗಳ ಖರೀದಿಗೆ ಚೀನಾ ಜತೆ ಒಪ್ಪಂದ ಮಾಡಿಕೊಂಡಿದೆ.

2022 ರ ಒಳಗೆ 36 ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯು ಪಡೆಗೆ ಸೇರಿಸಿಕೊಳ್ಳುವ ಯೋಜನೆ ರೂಪಿಸಿಕೊಳ್ಳಲಾಗಿತ್ತು. ಅದಕ್ಕೆ ಮೊದಲೇ ಪಾಕಿಸ್ತಾನ ವಾಯು ಪಡೆಗೆ ಚೀನಾದ ಜೆಎಫ್-17 ಜೆಟ್‍ಗಳು ಸೇರ್ಪಡೆಗೊಳ್ಳಲಿವೆ ಎಂದು ಗುಪ್ತಚರ ವರದಿ ತಿಳಿಸಿದೆ.

ಭಾರತದ ವಾಯು ಪಡೆಯ ಯುದ್ಧ ವಿಮಾನಗಳ ಸಾಮಥ್ರ್ಯವನ್ನು ಗಮನದಲ್ಲಿಟ್ಟುಕೊಂಡೇ ಪಾಕಿಸ್ತಾನವು ಚೀನಾದಿಂದ ಈ ವಿಮಾನಗಳ ಖರೀದಿ ಪ್ರಕ್ರಿಯೆ ಆರಂಭಿಸಿದೆ. ಪಾಕಿಸ್ತಾನದ ಏರೋನಾಟಿಕಲ್ ಕಾಂಪ್ಲೆಕ್ಸ್ ಸಂಸ್ಥೆಯ ಜತೆಗೂಡಿ ಚೀನಾದ ಚೆಂಗ್ದು ಏರ್‍ಕ್ರಾಫ್ಟ್ ಕಾರ್ಪೊರೇಷನ್ ಈ ವಿಮಾನಗಳನ್ನು ತಯಾರಿಸುತ್ತಿದೆ. ಶತ್ರು ನೆಲೆಗಳ ಮೇಲೆ ಮಿಂಚಿನ ದಾಳಿ ನಡೆಸಿ ಧ್ವಂಸಗೊಳಿಸುವ ಸಾಮಥ್ರ್ಯದ ಜೆಎಫ್-17 ಸರಣಿಯಲ್ಲಿಯೇ ಪ್ರಬಲ ಎಂದು ಪರಿಗಣಿಸಲಾಗಿರುವ ಜೆಎಫ್-17 ಬ್ಲಾಕ್-3 ಮಾದರಿಯ 13 ಜೆಟ್‍ಗಳನ್ನು ಮೊದಲ ಹಂತದಲ್ಲಿ ಪಾಕ್ ಖರೀದಿಸುತ್ತಿದೆ ಎಂದು ವರದಿ ತಿಳಿಸಿದೆ.