ಬೆಂಗಳೂರು(ಜೂನ್.13) ರಾಜ್ಯದಲ್ಲಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮುಂಗಾರು ಮಳೆಯು ಆಗಮಿಸಿದ್ದು ಉತ್ತಮ ಮಳೆಯಾಗುತ್ತಿದ್ದರೆ, ಇನ್ನೊಂದೆಡೆ ರಾಜ್ಯದ ಅನೇಕ ಕಡೆ ನೀರಿನ ಸಮಸ್ಯೆಯಿಂದಾಗಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟವನ್ನು ನಿಲ್ಲಿಸುವ ಪರಿಸ್ಥಿತಿ ಬಂದೊದಗಿದೆ.

ರಾಜ್ಯದ ಹಿಂದುಳಿದ ಭಾಗವೆಂದೇ ಕರೆಯಲ್ಪಡುವ ಹೈದರಾಬಾದ್ ಕರ್ನಾಟಕದ ಕಲಬುರಗಿ, ಯದಗಿರಿ, ರಾಯಚೂರು, ಕೊಪ್ಪಳ, ಹಾವೇರಿ, ಉತ್ತರ ಕನ್ನಡ ಹೀಗೆ ಹಲವು ಕಡೆ ಮಳೆಯಾಗದೆ ಕುಡಿಯಲು ನೀರಿಲ್ಲದ ಜನರು ಪರದಾಡುತ್ತಿದ್ದಾರೆ.

ಈ ಭಾಗದಲ್ಲಿ ನೀರಿನ ತೀವ್ರತೆ ಎಷ್ಟಿದೆ ಎಂದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕೊಡುತ್ತಿದ್ದ ಬಿಸಿಯೂಟದ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಅನೇಕ ಕಡೆ ಬಿಸಿಯೂಟ ನೀಡಲು ಸಾಧ್ಯವಾಗುತ್ತಿಲ್ಲ.

ಈ ಭಾಗದಲ್ಲಿ 15 ದಿನಗಳಿಗೊಮ್ಮೆ ಟ್ಯಾಂಕರ್ ಗಳ ಮೂಲಕ ನೀರು ಪೊರೈಕೆ ಮಾಡಲಾಗುತ್ತಿದೆ. ಪ್ರತಿಯೊಬ್ಬರಿಯೂ 8 ರಿಂದ 10 ಬಿಂದಿಗೆ ನೀರು ಮಾತ್ರ ಸಿಗುವಂತಹ ಪರಿಸ್ಥಿತಿ ಬಂದೊದಗಿದೆ. ಜನರಿಗೆ ಸ್ನಾನಕ್ಕೆ ನೀರು ಸಿಗದಿರುವಂತಹ ಪರಿಸ್ಥಿತಿ ಇದೆ.

ಇನ್ನು ಶಾಲೆಗಳಿಗೆ ಅಷ್ಟೋ ಇಸ್ಟೋ ನೀರು ಪೂರೈಕೆ ಮಾಡಿ ಬಿಸಿಯೂಟವನ್ನು ತಯಾರಿಸಿ ಮಕ್ಕಳಿಗೆ ನೀಡಲಾಗುತ್ತಿದೆ. ತಟ್ಟೆ ತೊಳೆಯಲು ನೀರು ಸಾಕಷ್ಟು ಪ್ರಮಾಣದಲ್ಲಿ ಇರದ ಕಾರಣ ಪ್ಲಾಸ್ಟಿಕ್ ತಟ್ಟೆಗಳನ್ನು ಊಟಕ್ಕೆ ನೀಡಲಾಗುತ್ತಿದೆ.