ಕೊಪ್ಪಳ(ಆ:12): ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಪ್ರವಾಹಪೀಡಿತ ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಇದ್ದ ಬೋಟ್ ನೀರುಪಾಲಾಗಿರುವ ಆಘಾತಕಾರಿ ಘಟನೆ ನಡೆದಿದ್ದು, ನೀರುಪಾಲಾಗಿದ್ದ ಐವರ ಪೈಕಿ ಮೂವರನ್ನು ರಕ್ಷಿಸಲಾಗಿದ್ದು, ಇಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ವಿರುಪಾಪುರ ನಡುಗಡ್ಡೆಯಲ್ಲಿ ಸಿಲುಕಿದ್ದ 70ಕ್ಕೂ ಅಧಿಕ ಜನರನ್ನು ಐವರು ರಕ್ಷಣಾ ಸಿಬ್ಬಂದಿ ಬೋಟ್‌ನಲ್ಲಿ ತೆರಳಿ ರಕ್ಷಿಸಿದ್ದರು. ಐವರು ಸಿಬ್ಬಂದಿ ಪುನಃ ಸಂತ್ರಸ್ತರನ್ನು ಕರೆ ತರಲು ನಡುಗಡ್ಡೆಯತ್ತ ಹೋಗುತ್ತಿದ್ದಾಗ ರಭಸವಾಗಿ ಬಂದ ನೀರಿನಿಂದಾಗಿ ಬೋಟ್ ಗಿಡಕ್ಕೆ ಬಡಿದು ಮಗುಚಿ ಬಿದ್ದಿದೆ. ಆಗ ಬೋಟ್‌ನಲ್ಲಿದ್ದ ಸಿಬ್ಬಂದಿ ನೀರು ಪಾಲಾಗಿದ್ದಾರೆ ಎನ್ನಲಾಗಿದೆ.

ನೀರಿಗೆ ಬಿದ್ದ ಸಿಬ್ಬಂದಿ ರಕ್ಷಣೆಗೆ ಮತ್ತೆರಡು ತಂಡ ರಚಿಸಲಾಗಿತ್ತು. ಎರಡು ಹೆಲಿಕಾಪ್ಟರ್‌ರನ್ನು ಕರೆತಂದು ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳದಲ್ಲಿದ್ದು ಸೂಚನೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.