ಬೆಂಗಳೂರು(ಫೆ. 15): ಪುಲ್ವಾಮಾದಲ್ಲಿ ನಿನ್ನೆ ನಡೆದ ಉಗ್ರರ ದಾಳಿಯನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಖಂಡಿಸಿದ್ದು ಉಗ್ರರ ನಾಶಕ್ಕೆ ಕೇಂದ್ರಕ್ಕೆ ಕೆಲವೊಂದು ಸಲಹೆಗಳನ್ನು ಸೂಚಿಸಿದ್ದಾರೆ.

ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕೂಡಲೇ ಕಡಿದುಕೊಳ್ಳಬೇಕು. ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಏನೂ ಪ್ರಯೋಜನವಿಲ್ಲ. ಆದ್ದರಿಂದ ಪ್ರತ್ಯೇಕ ಬಲೂಚಿಸ್ತಾನದ ಹೋರಾಟಕ್ಕೆ ಭಾರತ ಅಧಿಕೃತ ಬೆಂಬಲ ಕೊಡಬೇಕು. ಭಾರತದಲ್ಲಿ ಪಾಕ್ ರಾಯಭಾರಿ ಕಚೇರಿ ಬದಲು ಬಲೂಚಿಸ್ತಾನ ರಾಯಭಾರಿ ಕಚೇರಿಗೆ ಅವಕಾಶ ಕೊಡಬೇಕು ಎಂದು ಸ್ವಾಮಿ ಆಗ್ರಹಿಸಿದ್ದಾರೆ.

ಭಾರತದಲ್ಲಿರುವ ಪಾಕ್ ರಾಯಭಾರ ಕಚೇರಿಯ ಸಾವಿರಕ್ಕೂ ಹೆಚ್ಚು ಸಿಬ್ಬಂದಿಯವರು ಐಎಸ್‍ಐಯಿಂದಲೇ ನೇಮಕವಾಗಿದ್ಧಾರೆ. ಇವರು ಸ್ಥಳೀಯ ಮುಸ್ಲಿಮರನ್ನು ಉದ್ರೇಕಿಸುವ ಕೆಲಸ ಮಾಡುತ್ತಾರೆ. ಆದ್ದರಿಂದ ಪಾಕ್ ರಾಯಭಾರ ಕಚೇರಿಗಳನ್ನು ಮೊದಲು ಬಂದ್ ಮಾಡಬೇಕು ಎಂದು ಹೇಳಿದ್ದಾರೆ.

ಪಾಕಿಸ್ತಾನದ ನೆಲದಲ್ಲಿರುವ 40 ಉಗ್ರರ ಕ್ಯಾಂಪ್‍ಗಳನ್ನು ಧ್ವಂಸ ಮಾಡಬೇಕು. ಹಫೀಜ್ ಸಯೀದ್‍ರಂತಹ ದ್ರೋಹಿಗಳು ಇದೇ ಕ್ಯಾಂಪ್‍ಗಳಲ್ಲಿದ್ದಾರೆ. ಇವು ನಾಶವಾದರೆ ಉಗ್ರರ ಬೆನ್ನೆಲುಬು ಮುರಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇನ್ನು ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿ ಬಿಜೆಪಿಯ ವೈಫಲ್ಯ ಎಂದೂ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಶ್ಮೀರದಲ್ಲಿ ಉಗ್ರರನ್ನು ನಿಯಂತ್ರಿಸಲು ಬಿಜೆಪಿ ವಿಫಲವಾಗಿದೆ. ಆದರೂ ಕಾಲ ಮಿಂಚಿಲ್ಲ. ಹೊಸ ಕಾರ್ಯತಂತ್ರಗಳ ಮೂಲಕ ಉಗ್ರರ ನಾಶಕ್ಕೆ ಬಿಜೆಪಿ ಸಿದ್ಧವಾಗಲಿದೆ ಎಂದಿದ್ದಾರೆ.

ಪಾಕಿಸ್ತಾನಕ್ಕೆ 30 ವರ್ಷಗಳಿಂದ ನೀಡಿದ್ದ ಮೋಸ್ಟ್ ಫೇವರ್ಡ್ ನೇಷನ್ ಸ್ಥಾನವನ್ನು ಹಿಂಪಡೆಯುವುದೂ ಸಹ ಸುಬ್ರಮಣಿಯನ್ ಸೂಚಿಸಿದ ಸಲಹೆಯಾಗಿತ್ತು. ಇವತ್ತು ಕೇಂದ್ರ ಸರಕಾರವು ಈ ಕ್ರಮವನ್ನು ಕೈಗೊಂಡಿದೆ.

ಒಟ್ಟಾರೆ ಭಾರತದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿರುವ ಪಾಕಿಸ್ತಾನದ ಶಕ್ತಿಯನ್ನು ಕುಂದಿಸಿದರೆ ಈ ಉಗ್ರ ಸಮಸ್ಯೆಗೆ ಪರಿಹಾರ ಸಿಗುತ್ತದೆ ಸುಬ್ರಮಣಿಯನ್ ಸ್ವಾಮಿ ಅವರ ಅಭಿಪ್ರಾಯವಾಗಿದೆ.