ಭೂಪಾಲ್ (ಏ.19): ಭೂಪಾಲ್‍ನಿಂದ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಾಧ್ವಿ ಪ್ರಗ್ಯಾ ಠಾಕೂರ್, ವೀರಮರಣವನ್ನಪ್ಪಿದ ಪೊಲೀಸ್ ಅಧಿಕಾರಿ ಕುರಿತು ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು 26/11ರ ಮುಂಬೈ ಭಯೋತ್ಪಾದನಾ ದಾಳಿಯ ವೇಳೆ ಹುತಾತ್ಮರಾಗಿದ್ದ ಪೊಲೀಸ್ ಅಧಿಕಾರಿ ಹಾಗೂ ಮುಂಬೈ ಭಯೋತ್ಪಾದಕ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ಬಗ್ಗೆ ಸಾದ್ವಿ ತೀರಾ ಕೇಳಮಟ್ಟದಲ್ಲಿ ಮಾತನಾಡಿದ್ದು, ದೇಶದ್ಯಾಂತ ಟೀಕೆಗಳು ವ್ಯಕ್ತವಾಗುತ್ತೀವೆ.

ಹುತಾತ್ಮ ಹೇಮಂತ್ ಕರ್ಕರೆ , ನನ್ನ ಶಾಪದಿಂದ ಮತ್ತು ಅವರು ಮಾಡಿದ ಕರ್ಮದಿಂದಲೇ 2008ರ ನವೆಂಬರ್ 26ರಂದು ನಡೆದ ಮುಂಬೈ ದಾಳಿಯಲ್ಲಿ ಉಗ್ರರ ಗುಂಡೇಟಿಗೆ ಬಲಿಯಾಗಿ ಸತ್ತಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಚುನಾವಣಾ ಪ್ರಚಾರದ ಮೊದಲ ದಿನವೇ ವಿವಾದಕ್ಕೀಡಾಗಿದ್ದಾರೆ.

ಮಾಲೆಗಾಂವ್ ಬಾಂಬ್ ಸ್ಫೋಟದಲ್ಲಿ ಆರೋಪಿ ಆಗಿದ್ದ ಸಾಧ್ವಿ ಪ್ರಗ್ಯಾ ಹಾಗೂ ಹಿಂದೂ ಸಂಘಟನೆಯ ಹಲವು ಸದಸ್ಯರನ್ನು ಹೇಮಂತ್ ಕರ್ಕರೆ ಬಂಧಿಸಿದ್ದರು. ಆ ವೇಳೆ ಬಾಂಬ್ ಸ್ಫೋಟದಲ್ಲಿ ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿರಲಿಲ್ಲ. ಆದರೂ ನನ್ನನ್ನು ಬಂಧಿಸಿ ಹಿಂಸೆ ನೀಡಿದ್ದರು. ಆಗ ನಾನು ಅವರಿಗೆ ಶಾಪ ನೀಡಿದ್ದೆ ಎಂದು ಹೇಳಿದ್ದಾರೆ.

ಬಿಜೆಪಿ ಸಾಧ್ವಿ ಪ್ರಗ್ಯಾ ಠಾಕೂರ್ ಅವರನ್ನು ಭೂಪಾಲ್‍ನಲ್ಲಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂUಲವರ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಸುವ ಬಗ್ಗೆ ನಿರ್ಧರಿಸಲಾಗಿದೆ. 2008ರಲ್ಲಿ ಮಹಾರಾಷ್ಟ್ರದ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಪ್ರಗ್ಯಾ ಠಾಕೂರ್ ಆರೋಪಿಯಾಗಿದ್ದರು. ಬಳಿಕ, ಆಕೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ (ಯುಎಪಿಎ) ಅಡಿ ಇನ್ನೂ ಕಣ್ಗಾವಲಿನಲ್ಲಿದ್ದಾರೆ.
.
ಸಾಧ್ವಿ ಪ್ರಗ್ಯಾ ಅವರ ಹೇಳಿಕೆಗೆ ಐಪಿಎಸ್ ಅಸೋಸಿಯೇಷನ್ ಖಂಡನೆ ವ್ಯಕ್ತಪಡಿಸಿದ್ದು, ಅಶೋಕಚಕ್ರ ಗೌರವಕ್ಕೆ ಪಾತ್ರರಾಗಿದ್ದ ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆ ಭಯೋತ್ಪಾದಕರ ಜೊತೆಗೆ ಹೋರಾಡಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಅವರ ತ್ಯಾಗವನ್ನು ಅವಮಾನಿಸುವಂತಹ ಹೇಳಿಕೆಗೆ ನಮ್ಮ ವಿರೋಧವಿದೆ ಎಂದು ಟ್ವಿಟ್ ಮಾಡಲಾಗಿದೆ.

ಇನ್ನು ಸಾದ್ವಿ ಹೇಳಿಕೆ ಬಿಜೆಪಿ ಪಕ್ಷದ ನಾಯಕರಿಗೂ ನುಂಗಲಾರದ ತುತ್ತಾಗಿದ್ದು, ನಾಯಕರು ಏನು ಪ್ರತಿಕ್ರಿಯೇ ನೀಡುತ್ತಾರೆ ಎಂಬುದು ಭಾರೀ ಕೂತುಹಲ ಮೂಡಿಸಿದೆ.