ಬೆಂಗಳೂರು(ಜೂ:04): ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹೆಚ್.ವಿಶ್ವನಾಥ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಜೆಡಿಎಸ್ ಹಿರಿಯ ಮುಖಂಡ ಬಸವರಾಜ್ ಹೊರಟ್ಟಿಇಂದು ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಜಟಾಪಟಿ ನಡುವೆಯೇ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ರಾಮಲಿಂಗಾ ರೆಡ್ಡಿ ಕೂಡಾ ವಲಸಿಗರು, ಹೊಸಬರಿಗೆ ಮಣೆ ಹಾಕುತ್ತಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಇದೀಗ ಸಿದ್ದರಾಮಯ್ಯನವರು ಮೈತ್ರಿ ಸರ್ಕಾರದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿರುವ ಹೊರಟ್ಟಿ, ಕಾಂಗ್ರೆಸ್ ಮೈತ್ರಿಯನ್ನು ಪಾಲಿಸುತ್ತಿಲ್ಲ ಎಂದಿದ್ದಾರೆ. ವಿಧಾನಸಭೆಯಲ್ಲಿ ಜೆಡಿಎಸ್ ಗೆ ಸಭಾಪತಿ ಸ್ಥಾನ ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು, ಆದರೆ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ ಸಭಾಪತಿ ಸ್ಥಾನವನ್ನು ಪಡೆದಿತ್ತು ಎಂದರು. ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ್ ಅವರು ರಾಜೀನಾಮೆ ಕೊಡಬಾರದಿತ್ತು. ನನಗೆ ಜೆಡಿಎಸ್ ಅಧ್ಯಕ್ಷ ಸ್ಥಾನ ಬೇಡ, ಬಂಡೆಪ್ಪ ಕಾಶೆಂಪುರ್ ಸೂಕ್ತ ವ್ಯಕ್ತಿ ಎಂದು ಈ ಸಂದರ್ಭದಲ್ಲಿ ಹೇಳಿದರು.