ಬೆಂಗಳೂರು(ಏ:19): ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಇಂದು ರಾತ್ರಿ ನೆರವೇರಲಿದೆ. ಚೈತ್ರ ಹುಣ್ಣಿಮೆಯಾದ ಇಂದು ಮಧ್ಯರಾತ್ರಿ 12 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯದಿಂದ ಹೊರಡಲಿರುವ ಬೆಂಗಳೂರು ಕರಗ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ನಾಳೆ ಮುಂಜಾನೆ ವಾಪಸ್ಸಾಗಲಿದೆ.ಕರಗದ ಹಿನ್ನೆಲೆಯಲ್ಲಿ ನಿನ್ನೆ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಹಸಿ ಕರಗ ನೆರವೇರಿಸಲಾಗಿದೆ. ಈ ಬಾರಿ ಕರಗ ಹೊರುತ್ತಿರುವ ಅರ್ಚಕ ಮನು ಹಾಗೂ ವೀರಕುಮಾರರು ಸಂಪಂಗಿ ಕೆರೆ ಅಂಗಳಕ್ಕೆ ತೆರಳಿ ಪುಣ್ಯಸ್ನಾನ ಮತ್ತು ವಿವಿಧ ಧಾರ್ಮಿಕ ಆಚರಣೆಗಳನ್ನು ಪೂರ್ಣಗೊಳಿಸಿ ಮೆರವಣಿಗೆ ಮೂಲಕ ಧರ್ಮರಾಯಸ್ವಾಮಿ ದೇವಾಲಯ ತಲುಪಿದ್ದಾರೆ.

ಕರಗ ಹೊರುವ ಅರ್ಚಕ ಮನು ಇಂದು ಬೆಳಗ್ಗೆ ಕಬ್ಬನ್‍ಪಾರ್ಕ್ ನಲ್ಲಿರುವ ಕರಗದ ಕುಂಟೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಾಲಯಕ್ಕೆ ಹಿಂದಿರುಗಿ ಕರಗ ಹೊರುವ ಪೂರ್ವಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಕರಗ ಆರಂಭಕ್ಕೂ ಮುನ್ನ ಧರ್ಮರಾಯಸ್ವಾಮಿಯ ಮಹಾರಥೋತ್ಸವ ಹಾಗೂ ಮುತ್ಯಾಲಮ್ಮ ದೇವಿಯ ಉತ್ಸವ ನೆರವೇರಲಿದೆ. ಉತ್ಸವದ ನಂತರ ಸುಮಾರು 11.50ಕ್ಕೆ ಕರಗ ಶಕ್ತ್ಯೋತ್ಸವಕ್ಕೆ ಚಾಲನೆ ನೀಡಲಾಗುವುದು.

ಕರಗ ಹಲಸೂರುಪೇಟೆ, ಪ್ರಸನ್ನ ಗಂಗಾಧರೇಶ್ವರ ದೇವಾಲಯ, ನಗರ್ತಪೇಟೆ, ಮಕ್ಕಳ ಬಸವಣ್ಣಗುಡಿ, ಕೋಟೆ ಆಂಜನೇಯಸ್ವಾಮಿ ದೇವಾಲಯ, ಅರಳೇಪೇಟೆ, ಮಸ್ತಾನ್ ಸಾಹೇಬರ ದರ್ಗಾ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಪ್ರಾತಃಕಾಲ ಕೆ.ಆರ್.ಮಾರುಕಟ್ಟೆ ಮಾರ್ಗವಾಗಿ ದೇವಾಲಯಕ್ಕೆ ವಾಪಸ್ಸಾಗಲಿದೆ. ಕರಗದ ಹಿನ್ನೆಲೆಯಲ್ಲಿ ತಿಗಳರಪೇಟೆ ಸುತ್ತಮುತ್ತಲ ಪ್ರದೇಶಗಳನ್ನು ದೀಪಾಲಂಕಾರಗಳಿಂದ ಸಿಂಗರಿಸಲಾಗಿದೆ. ಧರ್ಮರಾಯಸ್ವಾಮಿ ದೇವಾಲಯದ ಮುಂದೆ ಜಾತ್ರೆ ನೆರವೇರುತ್ತಿದ್ದು, ರಾಜ್ಯ, ಹೊರರಾಜ್ಯಗಳಿಂದ ಆಗಮಿಸಿರುವ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ.

ಮೆಜೆಸ್ಟಿಕ್ ಸುತ್ತಮುತ್ತ ಹಬ್ಬದ ವಾತಾವರಣ ಮನೆ ಮಾಡಿದ್ದು, ಸ್ಥಳೀಯರು ಮನೆ ಮುಂಭಾಗ ಅರವಟ್ಟಿಗೆಗಳನ್ನು ಸ್ಥಾಪಿಸಿ ದಾರಿಹೋಕರಿಗೆ ಹಾಗೂ ಭಕ್ತರಿಗೆ ನೀರುಮಜ್ಜಿಗೆ ಪಾನಕ ವಿತರಿಸುತ್ತಿರುವ ದೃಶ್ಯ ಕಂಡುಬಂತು. ನಾಳೆ ರಾತ್ರಿ 2 ಗಂಟೆಗೆ ಧರ್ಮರಾಯ ಸ್ವಾಮಿ ದೇವಾಲಯದ ಆವರಣದಲ್ಲಿ ಶಕ್ತಿಸ್ಥಳ ಏಳು ಸುತ್ತಿನ ಕೋಟೆ ಪುರಾಣ ಪ್ರವಚನ ನಡೆದು, ಮುಂಜಾನೆ 4 ಗಂಟೆಗೆ ಗಾವು ಶಾಂತಿ ನೆರವೇರಲಿದೆ.ಭಾನುವಾರ ಸಂಜೆ 4 ಗಂಟೆಗೆ ವಸಂತೋತ್ಸವ ಆಚರಿಸಿ ರಾತ್ರಿ 12 ಗಂಟೆಗೆ ಧ್ವಜಾವರೋಹಣ ಮೂಲಕ 11 ದಿನಗಳ ಕರಗ ಉತ್ಸವಕ್ಕೆ ತೆರೆ ಎಳೆಯಲಾಗುತ್ತದೆ.