ಕಾಶ್ಮೀರ್(ಜ19): ಜಮ್ಮು-ಕಾಶ್ಮೀರದ ಲಡಾಖ್‍ನ ಖಾರ್‍ದುಂಗ ಲಾ ಪಾಸ್‍ನಲ್ಲಿ ಶುಕ್ರವಾರ ಸಂಭವಿಸಿದ ಹಿಮಪಾತದಲ್ಲಿ ಮೂವರು ಮೃತಪಟ್ಟಿದ್ದು, ಕಾಣೆಯಾದವರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.

ಸುಮಾರು 10 ಜನರು ಹಿಮಪಾತದಲ್ಲಿ ಸಿಲಿಕಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‍ಐ ವರದಿ ಮಾಡಿದೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ಪಡೆ ಘಟನಾ ಸ್ಥಳಕ್ಕೆ ಧಾವಿಸಿವೆ.

ಇನ್ನು ಈ ಪ್ರದೇಶ ಲೇಹ್ ಪಟ್ಟಣದಿಂದ 40 ಕಿ.ಮೀ.ದೂರದಲ್ಲಿದ್ದು, ಬೆಳಗ್ಗೆ 7 ಗಂಟೆಗೆ ಈ ಹಿಮಪಾತ ಸಂಭವಿಸಿದೆ ಎಂದು ಅಲ್ಲಿನ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. ಕಾಣೆಯಾದವರ ರಕ್ಷಣೆಗಾಗಿ ಸಿಬ್ಬಂದಿ ಮತ್ತು ಯಂತ್ರೋಪಕರಣಗಳನ್ನೂ ಬಳಸಿಕೊಳ್ಳಲಾಗಿದೆ. ಕಾಶ್ಮೀರ ವಿಭಾಗದ ಒಂಬತ್ತು ಜಿಲ್ಲೆಗಳ್ಳಾದ ಅನಂತ್ನಾಗ್, ಕುಲ್ಗಮ್, ಬಡ್ಗಮ್, ಬಾರಾಮುಲ್ಲಾ, ಕುಪ್ವಾರಾ, ಬಂಡಿಪೊರಾ, ಗಾಂಡ್ಬರ್ಲ್, ಕಾರ್ಗಿಲ್ ಮತ್ತು ಲೇಹ್ ಪ್ರದೇಶಗಳಿಗೆ ಹಠಾತ್ ಹಿಮಪಾತದ ಬಗ್ಗೆ ಮೊದಲೆ ಎಚ್ಚರಿಕೆ ನೀಡಲಾಗಿತ್ತು.

ಈ ನಡುವೆ ಜನವರಿ 19 ರಿಂದ ಜನವರಿ 23 ರವರೆಗೆ ಕಾಶ್ಮೀರ ಕಣಿವೆಯಲ್ಲಿ ಭಾರಿ ಹಿಮಪಾತವಾಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ.