ಬೆಂಗಳೂರು (ಫೆ.28): ಜಮ್ಮು ಕಾಶ್ಮೀರದ ಪುಲ್ವಾಮ ಉಗ್ರರ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಉಗ್ರರ ವಿರುದ್ಧ ಭಾರತ ಕೈಗೊಂಡ ಕಠಿಣ ನಿಲುವಿಗೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಇದರ ಪ್ರಭಾವ ಉಂಟಾಗಲಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಗ್ರರ ದಮನಕ್ಕೆ ನಾವು ಕೈಗೊಂಡ ಕ್ರಮದಿಂದಾಗಿ ಮೋದಿ ಪರವಾಗಿ ಅಲೆ ಸೃಷ್ಟಿಯಾಗಿದೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 22ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ನಾವು ಪಾಕ್ ಪ್ರದೇಶಕ್ಕೆ ಕಾಲಿಟ್ಟು ಅಲ್ಲಿರುವ ಉಗ್ರರ ಶಿಬಿರ ನಾಶ ಮಾಡಿದ್ದೇವೆ. ಇದರ ಪ್ರಭಾವವನ್ನು ನೀವು ಲೋಕಸಭಾ ಚುನಾವಣೆಯಲ್ಲಿ ಕಾಣುತ್ತೀರಿ.ಸರ್ಕಾರ ತೆಗೆದುಕೊಂಡ ಈ ಕ್ರಮ ಯುವಕರಲ್ಲಿ ಹೊಸ ಉತ್ಸಾಹ ಹುಟ್ಟಿಸಿದೆ. ಇದರಿಂದ 28 ಲೋಕಸಭಾ ಕ್ಷೇತ್ರಗಳ ಪೈಕಿ 22ಕ್ಕೂ ಹೆಚ್ಚು ಸ್ಥಾನಗಳು ಬಿಜೆಪಿ ಪಾಲಾಗಲಿವೆ. ಸೈನಿಕರ ಪ್ರಾಣ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಪ್ರಧಾನಿ ಹೇಳಿದ್ದರು. ಅದರಂತೆ ಅವರು ನಡೆದುಕೊಂಡಿದ್ದಾರೆ. ವಿಪಕ್ಷಗಳೂ ಮೋದಿ ನಿರ್ಧಾಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದಿದ್ದಾರೆ.

ಈ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಯಡಿಯೂರಪ್ಪ, ಸಿಎಂ ಏಳು ತಿಂಗಳಿಂದ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಅಭಿವೃದ್ಧಿ ಕಾರ್ಯ ನಿಲ್ಲಿಸಿ ರಾಜ್ಯದ ಖಜಾನೆ ಲೂಟಿ ಮಾಡುತ್ತಿದ್ದಾರೆ. ಕೇಂದ್ರದಿಂದ 900 ಕೋಟಿ ರೂ. ಹಣ ಕೊಟ್ಟರೂ ಖರ್ಚು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಬಿಎಸ್‍ವೈ ಹೇಳಿಕೆಗೆ ಸಿದ್ದರಾಮಯ್ಯ ಕಿಡಿಕಾರಿದ್ದಾರೆ ಹುತಾತ್ಮರಾದ ವೀರಯೋಧರ ಶವಗಳನ್ನು ಮುಂದಿಟ್ಟುಕೊಂಡು ಚುನಾವಣಾ ಲಾಭದ ಕನಸು ಕಾಣುತ್ತಿರುವ ಯಡಿಯೂರಪ್ಪ ಅವರ ರಾಜಕೀಯ ದುರಾಸೆಯ ಹೇಳಿಕೆಯನ್ನು ಖಂಡಿಸುತ್ತೇನೆ. ಸೈನಿಕರ ಕುಟುಂಬದವರ ಕಣ್ಣೀರು ಇನ್ನೂ ನಿಂತಿಲ್ಲ, ಆಗಲೇ ಸೀಟುಗಳ ಲೆಕ್ಕಾಚಾರ ಎಂದು ಟ್ವೀಟ್ ಮಾಡಿದ್ದಾರೆ.