ನವದೆಹಲಿ(ಫೆ.23): ನೀವು ದುಷ್ಪ ವ್ಯಾಘ್ರದ ಮೇಲೆ ಸವಾರಿ ಮಾಡುತ್ತಿದ್ದೀರಿ. ಆದರೆ ಆ ಹುಲಿ ಸವಾರನನ್ನೂ ಸುಮ್ಮನೆ ಬಿಡುವುದಿಲ್ಲ ಎಂಬುದು ನೆನಪಿರಲಿ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ಜಮ್ಮು ಕಾಶ್ಮೀರದ ಪುಲ್ವಾಮ ದಾಳಿಗೆ ನಾವೇ ಹೊಣೆ ಎಂದು ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಒಪ್ಪಿಕೊಂಡಿದ್ದರೂ ಸಹ ಪಾಕಿಸ್ತಾನ ಸಂಚುಕೋರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜೇಟ್ಲಿ ಆರೋಪಿಸಿದರು.

ಪಾಕಿಸ್ತಾನವನ್ನು ದುಷ್ಟ ಮತ್ತು ದೂರ್ತ ರಾಷ್ಟ್ರ ಎಂದು ಬಣ್ಣಿಸಿರುವ ಜೇಟ್ಲಿ, ಪುಲ್ಮಾಮಾ ದಾಳಿಗೆ ಹೊಣೆಯಾಗಿರುವ ಆ ದೇಶದ ವಿರುದ್ದ ನಿರ್ಣಾಯಕ ಹೋರಾಟದಲ್ಲಿ ಗೆಲುವು ಸಾಧಿಸಲು ರಾಜತಾಂತ್ರಿಕ ಸೇರಿದಂತೆ ಎಲ್ಲ ಆಯ್ಕೆಗಳನ್ನು ಭಾರತ ಜಾರಿಗೊಳಿಸಲಿದೆ ಎಂದು ಹೇಳಿದ್ದಾರೆ.

ದಾಳಿಗೆ ಕಾರಣರಾದವರ ಬಗ್ಗೆ ಸಾಕ್ಷ್ಯಾಧಾರ ನೀಡಿ ಎಂದು ಹೇಳಿರುವ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವರು, ಒಂದು ದೇಶದ ಮುಖ್ಯಸ್ಥರಾಗಿ ಪುರಾವೆ ಕೇಳುತ್ತಾರೆ. ಅವರ ಕಣ್ಣಮುಂದೆಯೇ ಇಂಥ ಕೃತ್ಯಗಳು ನಡೆಯುತ್ತಿದ್ದರೂ ಅದಕ್ಕಿಂತ ಸಾಕ್ಷಿ ಬೇಕೆ.? ನಿಮ್ಮ ದೇಶದಲ್ಲೇ ಕುಳಿತಿರುವ ಅಪರಾಧಿಗಳು ದಾಳಿಗೆ ನಾವೇ ಹೊಣೆ ಎಂದು ಹೇಳಿಕೊಂಡಿದ್ದರೂ, ಅದಕ್ಕಿಂತ ಆಧಾರ ಬೇಕೆ? ಎಂದು ಪ್ರಶ್ನಿಸಿದ್ಧಾರೆ.