ಬೆಂಗಳೂರು(ಜೂ:08): ಬಹುದಿನಗಳ ನಿರೀಕ್ಷೆಯಂತೆ ಸಾಂಸ್ಕೃತಿಕ ನಗರಿ ಮೈಸೂರಿನಿಂದ ರಾಜಧಾನಿ ಬೆಂಗಳೂರಿಗೆ ಜೂನ್ 7ರಿಂದ ವಿಮಾನಯಾನ ಆರಂಭವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ, ಪ್ರವಾಸೋದ್ಯಮ‌ ಸಚಿವ ಸಾ ರಾ ಮಹೇಶ್ ವಿಮಾನಯಾನಕ್ಕೆ ಚಾಲನೆ ನೀಡಿದರು. ಪ್ರಯಾಣಿಕರಿಗೆ ಕೇಕ್ ಹಾಗೂ ಬೋರ್ಡಿಂಗ್ ಪಾಸ್ ನೀಡಿ ಸಚಿವ ಜಿ.ಟಿ ದೇವೇಗೌಡ ಹಾಗೂ ಸಂಸದ ಪ್ರತಾಪ್ ಸಿಂಹ ಶುಭ ಕೋರಿದರು.

ಇದೇ ವೇಳೆ, ವಿಮಾನ ನಿಲ್ದಾಣ ಅಭಿವೃದ್ಧಿಗೆ 280 ಎಕರೆ ಭೂಮಿ ಸ್ವಾಧೀನ ಮಾಡಿದ್ದಕ್ಕೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೆಚ್.ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ‘ಮೋದಿಯವರು ಇಂತಹ ನಗರಗಳಿಗೂ ವಿಮಾನ ಸೇವೆ ಕೊಡಬೇಕು ಎನ್ನುವ ಉದ್ದೇಶದಿಂದ ಉಡಾನ್ ಯೋಜನೆ ತಂದಿದ್ದಾರೆ. ಇದಕ್ಕೆ ಪುನಶ್ಚೇತನ ನೀಡಲಾಗಿದೆ. ಬ್ರಾಂಡ್ ನ್ಯೂ ಏರ್ ಪೋರ್ಟ್ ನಿರ್ಮಾಣ ಮಾಡಲು ಹಾಗೂ ರನ್ ವೇ ವಿಸ್ತರಿಸಲು ಶೀಘ್ರದಲ್ಲೇ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭ ಮಾತನಾಡಿದ ಸಚಿವ ಜಿ.ಟಿ ದೇವೇಗೌಡ, ಉಡಾನ್ ಯೋಜನೆಯ ಅಡಿಯಲ್ಲಿ ಎರಡನೇ ವಿಮಾನಕ್ಕೆ ಚಾಲನೆ ನೀಡಲಾಗಿದೆ. ಮೊದಲು ಮೈಸೂರಿನಿಂದ ಹೈದರಾಬಾದ್ ವಿಮಾನ ಸೇವೆ ಒದಗಿಸಲಾಗಿದೆ. ಇಂದು ಮೈಸೂರಿನಿಂದ ಬೆಂಗಳೂರಿಗೆ ಎರಡನೇ ಸೇವೆಗೆ ಚಾಲನೆ ನೀಡಲಾಗಿದೆ. 32 ಜನ ಮೊದಲ ದಿನವೇ ಪ್ರಯಾಣ ಮಾಡುತ್ತಿದ್ದಾರೆ. ಪ್ರಯಾಣ ದರ 1500 ನಿಗದಿಗೊಳಿಸಲಾಗಿದೆ. ಜುಲೈ ಮೊದಲ ವಾರದಲ್ಲಿ ಉಳಿದ ಮೂರು ವಿಮಾನಗಳು ಕಾರ್ಯರಂಭಗೊಳ್ಳಲಿದೆ ಎಂದರು.