ಅಮರಾವತಿ(ನ.23) ಆಂಧ್ರಪ್ರದೇಶ ರಾಜ್ಯದ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಸರ್ಕಾರವು ತನ್ನ ರಾಜ್ಯದಲ್ಲಿರುವ ಎಲ್ಲಾ ಬಾರ್ ಗಳ ಲೈಸೆನ್ಸ್ ಗಳನ್ನು ಕಳೆದ ಶುಕ್ರವಾರದಂದು ರದ್ದುಪಡಿಸಿದೆ.

ಮುಂದಿನ ಎರಡು ವರ್ಷಗಳ ಅನುಗುಣವಾಗಿ ಹೊಸ ನಿಯಮವನ್ನು ಜಾರಿಗೆ ತಂದಿದೆ. ವೈಎಸ್ ಆರ್ ಸಿಪಿ ಸರ್ಕಾರ ಈ ಹೊಸ ಬಾರ್ ನೀತಿಯನ್ನು ಜಾರಿಗೊಳಿಸಿದ್ದು, 2020ರ ಜನವರಿಯಿಂದ ಈ ನಿಯಮ ಜಾರಿಗೆ ಬರಲಿದೆ. ಈ ನಿಯಮವು ಎರಡು ವರ್ಷಗಳ ಕಾಲ ಜಾರಿಯಲ್ಲಿರುತ್ತದೆ. ಹೊಸ ನಿಯಮದ ಅನ್ವಯ ಬಾರ್ ಗಳ ಪರವಾನಗಿ ಅರ್ಜಿ ಶುಲ್ಕವನ್ನು 10 ಲಕ್ಷ ರೂ ಎಂದು ನಿಗದಿಪಡಿಸಲಾಗಿದೆ. ಪರವಾನಗಿಯನ್ನು ಎರಡು ವರ್ಷಗಳವರೆಗೂ ಲಾಟರಿ ಮುಖಾಂತರ ಆಯ್ಕೆ ಮಾಡಲಾಗುತ್ತದೆ.

ಪರವಾನಗಿಯನ್ನು ಪಡೆಯಲು 50,000 ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ 25 ಲಕ್ಷ ರೂ, 5 ಲಕ್ಷದವರೆಗಿನ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ 50 ಲಕ್ಷ ರೂ, ಮತ್ತು 75,00,000 ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳಲ್ಲಿ 75 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಜನವರಿ 1, 2020 ರಿಂದ ರಾಜ್ಯದ ಬಾರ್‌ಗಳು ಬೆಳಿಗ್ಗೆ 11 ರಿಂದ ರಾತ್ರಿ 10 ರವರೆಗೆ ತೆರೆದಿರುತ್ತವೆ.

ಶುಕ್ರವಾರ ಹೊರಡಿಸಿದ ಆದೇಶದಲ್ಲಿ, ಬಾರ್‌ಗಳ ಸಂಖ್ಯೆಯನ್ನು ಕಡಿಮೆ ಮಾಡುವುದು, ಪರವಾನಗಿ ಶುಲ್ಕವನ್ನು ಹೆಚ್ಚಿಸುವುದು ಮತ್ತು ಹೊಸ ನೀತಿಯಡಿಯಲ್ಲಿ ಬಾರ್‌ಗಳ ವ್ಯವಹಾರ ಸಮಯವನ್ನು ಕಡಿಮೆ ಮಾಡುವುದು, ಸಾಮಾನ್ಯ ಜನರಿಗೆ ಮದ್ಯಗಳ ಲಭ್ಯತೆಯನ್ನು ಮತ್ತಷ್ಟು ಕಡಿತಗೊಳಿಸುವ ಗುರಿಯನ್ನು ಹೊಂದಿದೆ ಎಂದು ವೈಎಸ್ ಆರ್ ಸರ್ಕಾರವು ತಿಳಿಸಿದೆ.