ಅಲ್ಜೀರ್ಸ್(ಎ: 2) : ಪ್ರತಿಭಟನೆಗಳನ್ನು ಎದುರಿಸುತ್ತಿರುವ ಅಲ್ಜೀರಿಯ ಅಧ್ಯಕ್ಷ ಅಬ್ದುಲಝೀಝ್ ಭಾನುವಾರ ನೂರುದ್ದೀನ್ ಬೆದೂಯಿ ನೇತೃತ್ವದಲ್ಲಿ ನೂತನ ಸರಕಾರವೊಂದನ್ನು ಘೋಷಿಸಿದ್ದಾರೆ.ಅಬ್ದುಲಝೀಝ್ ಅಧಿಕಾರದಿಂದ ಕೆಳಗಿಳಿಯುವಂತೆ ಕರೆ ನೀಡಿರುವ ಸೇನಾ ಮುಖ್ಯಸ್ಥ ಅಹ್ಮದ್ ಸಲಾಹ್ ಉಪ ರಕ್ಷಣಾ ಸಚಿವರಾಗಿ ಮುಂದುವರಿದಿದ್ದಾರೆ.

ಕಾಯಿಲೆಪೀಡಿತರಾಗಿರುವ ಅಧ್ಯಕ್ಷ ಅಬ್ದುಲಝೀಝ್, 2013ರಲ್ಲಿ ಪಾರ್ಶ್ವವಾಯು ದಾಳಿಗೆ ಒಳಗಾದ ಬಳಿಕ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಆದರೆ, ತಾನು ಐದನೇ ಅವಧಿಗೆ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವುದಾಗಿ ಅವರು ಘೋಷಿಸಿದ ಬಳಿಕ, ದೇಶಾದ್ಯಂತ ಅವರ ವಿರುದ್ಧ ಭಾರೀ ಪ್ರತಿಭಟನೆ ನಡೆಯುತ್ತಿದೆ. ಅಧಿಕಾರದಿಂದ ಕೆಳಗಿಳಿಯುವಂತೆ ಅವರ ವಿರುದ್ಧ ಜನರು ಒತ್ತಡ ಹೇರುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ, ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಹಿಂದೆ ಸರಿಯುವುದಾಗಿ ಕಳೆದ ತಿಂಗಳ ಆರಂಭದಲ್ಲಿ ಅಧ್ಯಕ್ಷರು ಘೋಷಿಸಿದರು ಹಾಗೂ ಎಪ್ರಿಲ್‌ನಲ್ಲಿ ನಡೆಯಬೇಕಾಗಿದ್ದ ಚುನಾವಣೆಯನ್ನು ಮುಂದೂಡಿದರು.ಇದು ತನ್ನ ಎರಡು ದಶಕಗಳ ಅಧಿಕಾರವನ್ನು ಇನ್ನಷ್ಟು ವಿಸ್ತರಿಸುವ ಹುನ್ನಾರ ಎಂದು ಭಾವಿಸಿದ ಅಲ್ಜೀರಿಯದ ಜನರು ಅಧ್ಯಕ್ಷರ ವಿರುದ್ಧ ಮತ್ತಷ್ಟು ರೊಚ್ಚಿಗೆದ್ದಿದ್ದಾರೆ.