ನವದೆಹಲಿ (ಫೆ.12): ದೆಹಲಿಯ ಅರ್ಪಿತ್ ಪ್ಯಾಲೇಸ್ ಹೋಟೆಲ್‍ನಲ್ಲಿ ಮಂಗಳವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ 9 ಮಂದಿ ಮೃತಪಟ್ಟಿದ್ದಾರೆ.

ಹೋಟೆಲ್‍ನಲ್ಲಿ ಇಂದು ಮುಂಜಾನೆ 4.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಮಾತ್ರದಲ್ಲಿ ಬೆಂಕಿ ಇಡೀ ಹೋಟೆಲ್‍ನ್ನು ಆವರಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರೋಳಗೆ 9 ಮಂದಿ ಸಜೀವ ದಹನ ಹೊಂದಿದ್ದಾರೆ.

ಮೃತಪಟ್ಟವರಲ್ಲಿ ಏಳು ಪುರುಷರು, ಓರ್ವ ಮಹಿಳೆ ಎಂದು ಗುರುತಿಸಲಾಗಿದೆ. ಇನ್ನು ಶಾರ್ಟ್ ಸಕ್ರ್ಯೂಟ್‍ನಿಂದ್ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಹೋಟೆಲ್‍ನ ನಾಲ್ಕನೇ ಅಂತಸ್ತಿನಲ್ಲಿ ಮೊದಲು ಅಗ್ನಿ ಕಾಣಿಸಿಕೊಂಡಿತ್ತು. ನಂತರ ಎರಡನೇ ಅಂತಸ್ತಿನವರೆಗೂ ಬೆಂಕಿ ಹಬ್ಬಿದೆ. ಮೊದಲ ಅಂತಸ್ತು ಹಾಗೂ ಗ್ರೌಂಡ್ ಫ್ಲೋರ್ ಸುರಕ್ಷಿತವಾಗಿದೆ.

ಬೆಳಗ್ಗೆ 7 ಗಂಟೆಯವರೆಗೂ ದಟ್ಟವಾದ ಹೊಗೆ ಆವರಿಸಿತ್ತು. ಬೆಂಕಿಯನ್ನು ಸಂಪೂರ್ಣವಾಗಿ ಆರಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಸದ್ಯ, ಹೋಟೆಲ್‍ನಲ್ಲಿ ಶೋಧ ಕಾರ್ಯಾಚಾರಣೆ ಆರಂಭಿಸಲಾಗಿದೆ. ಹೋಟೆಲ್‍ನಲ್ಲಿ ಹಲವರು ಸಿಲುಕಿರುವ ಶಂಕೆ ಇದೆ ಎನ್ನಲಾಗಿದೆ.

ನಮಗೆ ಕರೆ ಬರುವಾಗ ಹೊಟೇಲ್‍ನ ಎಲ್ಲ ಕಡೆಗಳಲ್ಲೂ ಬೆಂಕಿ ಆವರಿಸಿತ್ತು. ಇದರಿಂದಾಗಿ ಬೆಂಕಿ ಆರಿಸುವುದು ದೊಡ್ಡ ಸವಾಲಿನ ಕೆಲಸವಾಯಿತು, ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.