ಸಿಂಗಪುರ(ಮಾ:21): ವಿಶ್ವದಲ್ಲಿರುವ ಅಗ್ಗದ ನಗರಗಳ ಪೈಕಿ ಬೆಂಗಳೂರಿಗೆ 5ನೇ ಸ್ಥಾನ ಲಭಿಸಿದೆ. ಚೆನ್ನೈ ಹಾಗೂ ನವದೆಹಲಿ 7ನೇ ಹಾಗೂ 8ನೇ ಸ್ಥಾನ ಪಡೆದುಕೊಂಡಿವೆ. ವಿಶ್ವದ 133 ನಗರಗಳಲ್ಲಿ ಈ ಸಮೀಕ್ಷೆಯನ್ನು ಕೈಗೊಳ್ಳಲಾಗಿದ್ದು, ಸರಕು ಮತ್ತು ಸೇವೆಗಳು ಸೇರಿದಂತೆ ಒಟ್ಟು 160 ಉತ್ಪನ್ನ ಮತ್ತು ಸೇವೆಗಳ ಬೆಲೆಗಳನ್ನು ತುಲನೆ ಮಾಡಲಾಗಿದೆ. ಸಮೀಕ್ಷೆ ಕೈಗೊಂಡ ನಗರಗಳಲ್ಲಿ ಆಹಾರ ಮತ್ತು ನೀರು, ಬಟ್ಟೆ, ಮನೆ ಬಾಡಿಗೆ, ಸಾರಿಗೆ, ಶಿಕ್ಷಣ ಹಾಗೂ ಮನರಂಜನೆಗೆ ಆಗುವ ವೆಚ್ಚವನ್ನು ಪರಿಗಣಿಸಲಾಗಿದೆ.

ಬೇರೆ ದೇಶಗಳಿಂದ ಉದ್ಯೋಗ ಹುಡುಕಿಕೊಂಡು ಹೋಗುವವರ ಅನುಕೂಲಕ್ಕಾಗಿ ಈ ಸಮೀಕ್ಷೆಯನ್ನು ನಡೆಸಲಾಗಿದೆ ಎಂದು ದಿ ಎಕನಾಮಿಸ್ಟ್‌ ಇಂಟೆಲಿಜೆನ್ಸ್‌ ಯುನಿಟ್‌ ಹೇಳಿದೆ. ಕಂಪೆನಿಗಳು ಸಮೀಕ್ಷೆಯಲ್ಲಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಉದ್ಯೋಗಿಗಳಿಗೆ ನೀಡುವ ವೇತನ, ಇತರ ಭತ್ಯೆಗಳನ್ನು ಲೆಕ್ಕಾಚಾರ ಹಾಕಲಿ ಎಂಬುದು ಈ ಸಮೀಕ್ಷೆಯ ಉದ್ದೇಶ ಎಂದು ಸಂಸ್ಥೆ ಹೇಳಿದೆ.