ಬೆಂಗಳೂರು(ಜ.21): ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಆಪ್ತೆ ವಿ.ಕೆ. ಶಶಿಕಲಾ ನಟರಾಜನ್ ಭ್ರಷ್ಟಾಚಾರ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಅವರಿಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯಗಳನ್ನು ನೀಡಲಾಗಿತ್ತಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.

ಈ ಹಿಂದೆ ಐಪಿಎಸ್ ಅಧಿಕಾರಿ ಡಿ. ರೂಪಾ ಶಶಿಕಲಾ ನಟರಾಜನ್ ಅವರಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ತನಿಖೆಗೆ ಸಮಿತಿ ರಚಿಸಲಾಗಿತ್ತು. ವಿ.ಕೆ.ಶಶಿಕಲಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದುದು ನಿಜ ಎಂಬುದು ಈ ಸಮಿತಿ ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಬಹಿರಂಗವಾಗಿದೆ.

ಜೈಲಿನ ನಿಯಮಗಳನ್ನು ಉಲ್ಲಂಘಿಸಿ ಶಶಿಕಲಾ ಅವರಿಗೆ ಪ್ರತ್ಯೇಕ ವಾಗಿ ಅಡುಗೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದ್ದು, ಇತರ ಸೌಲಭ್ಯ ಗಳನ್ನೂ ಒದಗಿಸಲಾಗಿದೆ ಎಂದು ತಿಳಿದು ಬಂದಿದೆ.

ಶಶಿಕಲಾ ಸಂಬಂಧಿ ಇಳವರಸಿ ಶಿಕ್ಷೆಗೊಳಗಾಗಿದ್ದು, ಇವರಿಬ್ಬರಿಗೇ ಜೈಲು ಅಧಿಕಾರಿಗಳು 5 ಸೆಲ್ ಗಳನ್ನು ನೀಡಿದ್ದಾರೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಅಲ್ಲದೆ ಶಶಿಕಲಾ ಹಾಗೂ ಇಳವರಸಿಗೆ ಪ್ರತ್ಯೇಕವಾಗಿ ಅಡುಗೆ ಮಾಡಿಕೊಡಲು ಮಹಿಳಾ ಖೈದಿಯೊಬ್ಬರನ್ನು ಅಕ್ರಮವಾಗಿ ನೇಮಿಸಲಾಗಿತ್ತು ಎಂಬ ಅಂಶವು ತನಿಖೆ ವೇಳೆ ಬೆಳಕಿಗೆ ಬಂದಿದೆ. ಜೊತೆಗೆ ಶಶಿಕಲಾ ಕೆಲವೊಮ್ಮೆ ನಾಲ್ಕು ತಾಸುಗಳ ಕಾಲ ಸಂದರ್ಶಕರನ್ನು ಭೇಟಿಯಾಗಿರುವುದು ಸಹ ವರದಿ ಮೂಲಕ ಬಯಲಾಗಿದೆ.