ಮಂಗಳೂರು(ಆಗಸ್ಟ್.12) ಉತ್ತರ ಕರ್ನಾಟಕ ಹಾಗು ದಕ್ಷಿಣ ಕನ್ನಡದ ಒಳನಾಡಿನಲ್ಲಿ ಭೂಕುಸಿತ ಮತ್ತು ಪ್ರವಾಹ ಸಂಭವಿಸಿದ್ದು, ಮನೆ ಕಳೆದುಕೊಂಡಿರುವ ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಿಸಲು ₹ 5 ಲಕ್ಷ ಪರಿಹಾರ ನೀಡಲಾಗುವುದು ಮತ್ತು ಹಾನಿಯಾದ ಮನೆಗಳ ದುರಸ್ತಿಗೆ ₹ 1 ಲಕ್ಷ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನವರು ಘೋಷಣೆ ಮಾಡಿದ್ದಾರೆ.

ಸಿಎಂ ಯಡಿಯೂರಪ್ಪನವರು ಇಂದು ಮಂಗಳೂರು ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕುಕ್ಕಾವು ಗಂಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಅಳಲನ್ನು ಕೇಳಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತುರ್ತು ಪರಿಹಾರವಾಗಿ ಪ್ರತಿ ಕುಟುಂಬಕ್ಕೆ ತಲಾ ₹ 10,000 ನೆರವನ್ನು ಸೋಮವಾರ ಸಂಜೆಯೊಳಗೆ ವಿತರಣೆ ಮಾಡುತ್ತೇವೆ.

ಸಂತ್ರಸ್ತ ಕುಟುಂಬಗಳ ಮನೆ ದುರಸ್ತಿ ಮತ್ತು ಹೊಸ ಮನೆ ನಿರ್ಮಾಣ ಆಗುವವರೆಗೆ ಪ್ರತಿ ತಿಂಗಳು ₹ 5,000 ಬಾಡಿಗೆ ವೆಚ್ಚ ನೀಡಲಾಗುವುದು ಎಂದು ತಿಳಿಸಿದರು. ಇನ್ನ ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 282 ಮನೆಗಳು ಸಂಪೂರ್ಣವಾಗಿ ನೆಲಸಮವಾಗಿವೆ. ಈ ಕುಟುಂಬಗಳಿಗೆ ತಲಾ ₹ 5 ಲಕ್ಷ ನೀಡಲಾಗುವುದು ಅಂತ ಹೇಳಿದರು.