ಶ್ರೀನಗರ (ಫೆ.18): ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭೀಕರ ಉಗ್ರರ ದಾಳಿಗೆ ಸೇನೆಯ 40 ಸೈನಿಕರು ಹುತಾತ್ಮರಾಗಿದ್ದರು. ಈ ಕಹಿ ಘಟನೆಯ ನೆನಪು ಮಾಸುವ ಮೊದಲೇ ಉಗ್ರರ ವಿರುದ್ಧ ನಡೆದ ಕಾರ್ಯಾಚಾರಣೆಯಲ್ಲಿ ನಾಲ್ಕು ಯೋಧರು ಹುತಾತ್ಮರಾಗಿದ್ದಾರೆ.

ಇಂದು ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರು ದಾಳಿ ನಡೆಸಿದ್ದು ಓರ್ವ ಮೇಜರ್ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಸೇನೆ ಮುಂದಾಗಿದೆ.

ಪಿಂಗ್ಲಾನ್ ಭಾಗದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆ ಭಾರತೀಯ ಸೇನೆ ಈಗ ಕಾರ್ಯಾಚರಣೆಗೆ ಇಳಿದಿದೆ. ಸೋಮವಾರ ಬೆಳಗಿನಜಾವ ಉಗ್ರರು ಹಾಗೂ ಭಾರತೀಯ ಸೇನೆ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಉಗ್ರರು ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಭಾರತೀಯ ಸೇನೆ ಕೂಡ ಪ್ರತಿ ದಾಳಿ ನಡೆಸಿದೆ.

ಕಾರ್ಯಾಚರಣೆ ಮುಂದುವರಿದಿದೆ. ನಾಲ್ಕು ಸೈನಿಕರು ಹುತಾತ್ಮರಾಗಿದ್ದಾರೆ. ಕೆಲ ಯೋಧರಿಗೆ ಗಾಯಗಳಾಗಿವೆ. ಸದ್ಯ, ಎರಡು ಉಗ್ರರು ಮನೆಯೊಂದರಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಅವರನ್ನು ಹೊಡೆದುರುಳಿಸಲು ಸೇನೆ ಕಾರ್ಯಾಚರಣೆ ಮುಂದುವರಿಸಿದೆ.

ಹುತಾತ್ಮರಾದವರನ್ನು ಮೇಜರ್ ಡಿ.ಎಸ್.ದೊಂಡಿಯಲ್, ಹೆಡ್ ಕಾನ್ಸ್ಟೇಬಲ್ ಸೇವ್ ರಾಮ್, ಅಜಯ್ ಕುಮಾರ್ ಮತ್ತು ಹರಿ ಸಿಂಗ್ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಯೋಧ ಗುಲ್ಜಾರ್ ಮೊಹಮ್ಮದ್ ತೀವ್ರವಾಗಿ ಗಾಯಗೊಂಡಿದ್ದು, ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೊರ ಪ್ರದೇಶದಲ್ಲಿ ಭಯೋತ್ಪಾದಕರು ಕಳೆದ ಗುರುವಾರ ಭೀಕರ ಬಾಂಬ್ ದಾಳಿ ನಡೆಸಿದ್ದರು. ಈ ವೇಳೆ ಮದ್ದೂರಿನ ಗುರು ಹೆಸರಿನ ಯೋಧ ಸೇರಿ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. 20 ವರ್ಷಗಳಲ್ಲಿ ನಡೆದ ದಾಳಿಗಳಲ್ಲಿ ಅತೀ ದೊಡ್ಡ ದಾಳಿ ಇದಾಗಿದೆ.