WhatsApp Image 2018-03-29 at 3.24.42 PM

ಮಧುಗಿರಿ,ಮಾ.೨೯: ‘ಹುಲಿ ರಸ್ತೆ ದಾಟುತ್ತಿದೆ’ ಎಂದು ಚಿತ್ರದ ಜೊತೆ ಸಂದೇಶವನ್ನು ಫೇಸ್ ಬುಕ್ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಪ್ರಕಟಿಸಿದ್ದು, ಇಲ್ಲಿನ ಹಿಂದೂಪುರ ರಸ್ತೆಯಲ್ಲಿ ರಾತ್ರಿ 8:30ರ ಸುಮಾರಿಗೆ ಭಯಭೀತ ವಾತಾವರಣ ಸೃಷ್ಟಿಯಾಗಿತ್ತು.

ಸುತ್ತಮುತ್ತಲೂ ಎಲ್ಲೂ ಹುಲಿಯ ಹೆಜ್ಜೆ ಗುರುತುಗಳು ಕಾಣದೆ
ಅರಣ್ಯ ಇಲಾಖೆಯ ಸಿಬ್ಬಂದಿ ಗುರುವಾರ ನಸುಕಿನಲ್ಲೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಬಾಯಿಂದ ಬಾಯಿಗೆ ಸುದ್ದಿ ಹರಡಿ ಜನರ ಚರ್ಚೆಗೆ ಗ್ರಾಸವಾಗಿದ್ದಲ್ಲದೆ
ಕುತೂಹಲದಿಂದ ಜನರು ಸಹ ಹುಲಿಯ ಹೆಜ್ಜೆ ಗುರುತಿಗಾಗಿ ಹುಡುಕಿದರು.

ಇದು ಸುಳ್ಳು ಸುದ್ದಿಯಾಗಿದ್ದು
ಚಿತ್ರದಲ್ಲಿ ಕಾಣುತ್ತಿರುವ, ಹೆದ್ದಾರಿ, ಸ್ಥಳದ ಚಿತ್ರಣ ತಾಲ್ಲೂಕಿನದು ಇರುವಂತೆ ಕಾಣುತ್ತಿಲ್ಲ.
ಬೇರೆ ಎಲ್ಲಿಯದೋ ಸ್ಥಳದ ಚಿತ್ರ ಇರಬೇಕು. ಯಾರೋ ಬೇಕಂತಲೇ ಮಧುಗಿರಿ- ಹಿಂದೂಪುರದ ಹೆದ್ದಾರಿ ಎಂದು ನಮೂದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದಾರೆ. ನಮ್ಮ ಭಾಗದಲ್ಲಿ ಹುಲಿಗಳು ಇಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಮಾಧ್ಯಮಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದರು.

ಚಿರತೆಗಳು ಈ ಭಾಗದಲ್ಲಿ ಸಾಕಷ್ಟು ಇವೆ. ಹುಲಿ ನಮಗೆ ಎಂದೂ ಕಾಣಿಸಿಲ್ಲ. ಆದರೂ ಚಿತ್ರ ನೋಡಿದ ನಂತರ ಭಯವಾಗುತ್ತಿದೆ ಎಂದು ಗ್ರಾಮಸ್ಥರೊಬ್ಬರು ಹೇಳಿದರು.

ಮಲ್ಲೇನಹಳ್ಳಿಯ ಸಮೀಪವಿರುವ ರಸ್ತೆ, ತೋಟ ಹಾಗೂ ನೀರು ಇರುವ ಹೊಂಡಗಳ ಸಮೀಪದಲ್ಲಿ ಹುಲಿಯ ಹೆಜ್ಜೆಗಳ ಗುರುತುಗಳು ಪತ್ತೆಯಾಗಿಲ್ಲ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಸ್ಪಷ್ಟ ಪಡಿಸಿದರು.