WhatsApp Image 2018-02-28 at 6.18.08 PM

ಚಿಕ್ಕಮಗಳೂರು, ಫೆ.28: ಶಾಸಕ ಸಿ.ಟಿ.ರವಿಗೆ ಜೀವ ಬೆದರಿಕೆ ಪತ್ರ ಬಂದಿದ್ದ ಪ್ರಕರಣ ಸಂಬಂಧ ತನಿಖೆ ಮುಂದುವರಿದ್ದು, ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ.

ಬುಧವಾರ ಎಸ್ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ಇಲಾಖೆ ಬೆದರಿಕೆ ಪತ್ರದ ಬಗ್ಗೆ ತನಿಖೆ ಸಂಬಂಧ ತಂಡ ರಚಿಸಿದೆ. ಈ ತಂಡ ಕಲೆ ಹಾಕಿದ ಮಾಹಿತಿ ಪ್ರಕಾರ ಶಾಸಕ ಸಿ.ಟಿ.ರವಿ ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಚಟುವಟಿಕೆಯಲ್ಲಿ ಸಕ್ರೀಯರಾಗಿರುವುದು ತಿಳಿದು ಬಂದಿದೆ. ರಾಮನಗರ ಜಿಲ್ಲೆಯ ಶಿಕ್ಷಣ ಸಂಸ್ಥೆಯೊಂದಕ್ಕೆ ಸಂಬಂಧಿಸಿದಂತೆ ಸಿ.ಟಿ.ರವಿ ಈ ಹಿಂದೆ ಮೂಗು ತೂರಿಸಿದ್ದಾರೆಂಬ ಕಾರಣಕ್ಕೆ ಸಂಸ್ಥೆಯ ಎರಡು ಗುಂಪುಗಳಲ್ಲಿ ಭಿನ್ನಾಭಿಪ್ರಾಯ ಏರ್ಪಟ್ಟಿದೆ. ಈ ಪೈಕಿ ಒಂದು ಗುಂಪು ಶಾಸಕ ರವಿಗೆ ಬೆದರಿಕೆ ಪತ್ರ ಕಳುಹಿಸಿರಬಹುದೆಂಬ ಬಗ್ಗೆ ಶಂಕೆ ಇದೆ. ಈ ಬಗ್ಗೆ ಹೆಚ್ಚಿನ ತನಿಖೆ ಬಳಿಕ ಆರೋಪಿಗಳ ಬಂಧನವಾಗಲಿದೆ ಎಂದ ಅವರು, ಸದ್ಯ ಶಾಸಕರಿಗೆ ಬೆದರಿಕೆ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ನೀಡಲಾಗಿದೆ ಎಂದರು.