ಶಿವಮೊಗ್ಗ, (ಮಾರ್ಚ್ 27 ) ಮೆಗ್ಗಾನ್ ಆಸ್ಪತ್ರೆಯಲ್ಲಿ ಮಕ್ಕಳ ಮತ್ತು ಗರ್ಭಿಣಿಯರ ಪ್ರಕರಣಗಳನ್ನು ಹೊರತುಪಡಿಸಿ, ಇತರ ಹೊರ ರೋಗಿ ವಿಭಾಗವನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ, ಶಿವಮೊಗ್ಗ ನಗರದ ಮೂರು ನಗರ ಆರೋಗ್ಯ ಕೇಂದ್ರಗಳಲ್ಲಿ ಮೆಗ್ಗಾನ್ ಆಸ್ಪತ್ರೆಯ ತಜ್ಞ ವೈದ್ಯರನ್ನು ಒಳಗೊಂಡ ಹೊರ ರೋಗಿ ವಿಭಾಗವನ್ನು ಆರಂಭಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೂಚನೆ ನೀಡಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದರು.

ಶಿವಮೊಗ್ಗ ನಗರದ ತುಂಗಾ ನಗರ, ವಿದ್ಯಾ ನಗರ ಮತ್ತು ಕೋಟೆ ನಗರ ಆರೋಗ್ಯ ಕೇಂದ್ರಗಳಲ್ಲಿ ಹೊರ ರೋಗಿ ವಿಭಾಗ ತಕ್ಷಣ ಆರಂಭಿಸಬೇಕು. ಮಕ್ಕಳ ಮತ್ತು ಗರ್ಭಿಣಿಯರ ಹೊರ ರೋಗಿ ವಿಭಾಗ ಮೆಗ್ಗಾನ್ ಆಸ್ಪತ್ರೆಯಲ್ಲಿಯೇ ಮುಂದುವರೆಯಲಿದೆ. ನಗರ ಆರೋಗ್ಯ ಕೇಂದ್ರಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಲಭ್ಯವಾಗಲಿದೆ. ಒಳರೋಗಿಯಾಗಿ ದಾಖಲು ಮಾಡಲು ತಜ್ಞ ವೈದ್ಯರು ಶಿಫಾರಸು ಮಾಡಿದರೆ, ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ದಾಖಲು ಮಾಡಬೇಕು. ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ಆರೋಗ್ಯ ಮಿತ್ರ ಕೌಂಟರ್ ತೆರೆಯಲಾಗಿದ್ದು, ಅವರನ್ನು ಸಂಪರ್ಕಿಸಿದ ಬಳಿಕ ಚಿಕಿತ್ಸೆಗಾಗಿ ದಾಖಲಾಗಬಹುದಾಗಿದೆ ಎಂದು ಹೇಳಿದರು.

ಎಲ್ಲಾ ಖಾಸಗಿ ಕ್ಲಿನಿಕ್‍ಗಳಲ್ಲಿ ರೋಗಿಗಳ ಚಿಕಿತ್ಸೆಗೆ ಅವಕಾಶವಿದೆ. ಒಂದಕ್ಕಿಂತ ಹೆಚ್ಚು ರೋಗ ಲಕ್ಷಣಗಳನ್ನು ಹೊಂದಿರುವವರನ್ನು ಚಿಕಿತ್ಸೆಗೆ ಮೆಗ್ಗಾನ್‍ಗೆ ಕಳುಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅಂತಹ ಕ್ಲಿನಿಕ್‍ಗಳಲ್ಲಿ ಅನುಸರಿಸಬೇಕು ಎಂದು ಅವರು ಹೇಳಿದರು.
ಹೊರ ಜಿಲ್ಲೆ ಗಡಿ ಸಂಪೂರ್ಣ ಬಂದ್: ಅಗತ್ಯ ಸೇವೆಗಳನ್ನು ಹೊರತುಪಡಿಸಿ ಹೊರ ಜಿಲ್ಲೆಗಳಿಂದ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮಂಗಳೂರು, ಉಡುಪಿ ಕಡೆಯಿಂದ ಅಗತ್ಯ ಸೇವೆಯನ್ನು ಹೊರತುಪಡಿಸಿ, ಯಾವುದೇ ವಾಹನ ಎಸ್ಪಿಯವರ ಅನುಮತಿಯಿಲ್ಲದೇ, ಜಿಲ್ಲೆಗೆ ಪ್ರವೇಶಿಸುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಜಿಲ್ಲೆಯ ಗಡಿಭಾಗಗಳಲ್ಲಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಗ್ರಾಮಗಳ ರಸ್ತೆಗಳನ್ನು ಸಂಪೂರ್ಣವಾಗಿ ಮುಚ್ಚಿ ತಾತ್ಕಾಲಿಕ ಚೆಕ್‍ಪೋಸ್ಟ್ ಆರಂಭಿಸಬೇಕು. ದಿನದ 24 ಗಂಟೆ ಕಾರ್ಯನಿರ್ವಹಿಸಲು ಸಿಬ್ಬಂದಿ ನೇಮಕ ಮಾಡಬೇಕು. ಯಾರಾದರೂ ಅಂತಹ ಮಾರ್ಗದ ಮೂಲಕ ಜಿಲ್ಲೆ ಪ್ರವೇಶಿಸಿದರೆ ಸಂಬಂಧಿಸಿದ ಪಿಡಿಒ ಮತ್ತು ರೆವಿನ್ಯೂ ಅಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಹೆಚ್ಚವರಿ ಪೊಲೀಸ್ ವರಿಷ್ಟಾಧಿಕಾರಿ ಡಾ.ಹೆಚ್.ಟಿ.ಶೇಖರ್, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಠಾರೆ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.