ಮತ್ತೆ ಮತ್ತೆ ಬ್ಯಾಂಕ್‍ಗಳ ವಿಲೀನದ ಸುದ್ದಿ ನಿಮಗೆಲ್ಲಾ ಗೊತ್ತೇ ಇದೆ. ಈ ಕುರಿತು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಗಳು ಹಲವು ಚರ್ಚೆಗಳಿಗೆ ಗ್ರಾಸವಾಗಿವೆ. ಈ ನಡುವೆ ರಾಜ್ಯದಲ್ಲಿ ಎರಡು ಪರೀಕ್ಷಾ ಮಂಡಳಿಗಳು ವಿಲೀನಗೊಳ್ಳುವ ಸುದ್ದಿ ಹೊರ ಬಂದಿದೆ. ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗೆ ಏಕೈಕ ಮಂಡಳಿ ಡಿಸೆಂಬರ್‍ನಲ್ಲಿ ಅಸ್ತಿತ್ವಕ್ಕೆ ಬರಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಘೋಷಣೆ ಮಾಡಿದ್ದು, ಸದ್ಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಕರ್ನಾಟಕ ಸೆಕೆಂಡರಿ ಎಜುಕೇಷನ್ ಎಕ್ಸಾಮಿನೇಷನ್ ಬೋರ್ಡ್ ಮತ್ತು ಪಿಯು ಪರೀಕ್ಷೆಯನ್ನು ಪಿಯು ಶಿಕ್ಷಣ ಇಲಾಖೆ ನಡೆಸುತ್ತಿದೆ. ಎರಡೂ ಮಂಡಳಿಗಳು ಹೆಚ್ಚು ಕಡಿಮೆ ಒಂದೇ ಮಾದರಿಯ ಪರೀಕ್ಷೆ ಅನುಸರಿಸುತ್ತಿದ್ದರೂ ಎರಡು ಮಂಡಳಿಗಳು ಪ್ರತ್ಯೇಕವಾಗಿ ಒಂದಷ್ಟು ಕೋಟಿ ಖರ್ಚು ಮಾಡುತ್ತಿವೆ. ಹೀಗಾಗಿ ಎರಡೂ ಮಂಡಳಿಗಳ ವಿಲೀನ ಈಗ ಅಗತ್ಯ ಎಂದಿದ್ದಾರೆ.