ನಾಡಧ್ವಜದ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಕನ್ನಡ ಮತ್ತು ಸಂಸ್ಕøತಿ ಸಚಿವ ಸಿ.ಟಿ ರವಿ ಅವರು ಧ್ವಜ ಸಂಹಿತೆ ಪ್ರಕಾರ ಒಂದು ರಾಷ್ಟ್ರ ಒಂದು ಧ್ವಜ ಎಂಬ ನಿಲುವು ನಮ್ಮದು ಎಂದು ಹೇಳಿದ ಬೆನ್ನಲ್ಲೇ ವಿಷಯ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ನಾಡ ಧ್ವಜದ ವಿಚಾರವು ಕೇಂದ್ರದ ಬಾಕಿ ಇರುವ ಕಾರಣ ಅಸಮಧಾನ ಹೊರ ಹಾಕಿರುವ ಇವರು ಬಿಜೆಪಿ ಸರ್ಕಾರ ಕನ್ನಡಿಗರ ಭಾವನೆಗಳ ವಿರುದ್ಧ ನಡೆದುಕೊಳ್ಳುತ್ತಿದೆ ಎಂದು ಕಿಡಿ ಕಾರಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು ನಾವು ಪ್ರತ್ಯೇಕ ಧ್ವಜ ಕೇಳುತ್ತಿಲ್ಲ. ರಾಜ್ಯಗಳು ತಮ್ಮದೇ ಧ್ವಜ ಹೊಂದಲು ಸಂವಿಧಾನ ಇಲ್ಲವೇ ಕಾನೂನಿನಲ್ಲಿ ಯಾವ ಅಡ್ಡಿಯೂ ಇಲ್ಲ. ರಾಜ್ಯದ ಬಿಜೆಪಿ ಸರ್ಕಾರ ಕನ್ನಡಿಗರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದಿದ್ದಾರೆ. ನಾವು ನಮಗೊಂದು ನಾಡ ಗೀತೆಯನ್ನು ಒಪ್ಪಿಕೊಂಡಿಲ್ಲವೇ ? ಇದರಿಂದ ರಾಷ್ಟ್ರಗೀತೆಗೆ ಅವಮಾನ ಮಾಡಿದಂತಾಗುತ್ತದೆಯೇ? ರಾಷ್ಟ್ರ ಧ್ವಜದ ಕೆಳಗೆ ಬೇರೆ ಧ್ವಜ ಹಾರಿಸಬೇಕೆಂದು ರಾಷ್ಟ್ರಧ್ವಜ ಸಂಹಿತೆ ಹೇಳಿದೆ. ಅದನ್ನು ಪಾಲಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯ ಬೇರೇನು ಸಮಸ್ಯೆ ಇದೆ? ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಾಡ ಧ್ವಜ ಹೊಂದುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಮುಂದಿಟ್ಟಿತ್ತು. ಈಗ ಸಿಟಿ ರವಿ ಹೇಳಿಕೆಯನ್ನ ಸಿದ್ದರಾಮಯ್ಯ ಅವರು ಖಂಡಿಸಿದ್ದಾರೆ